ಅಪರಾಧ ಸಮಗ್ರ ಸುದ್ದಿ

ಸೌದಿಯಲ್ಲಿ ಮರಣದಂಡನೆಗೆ ಒಳಗಾದ ಕೇರಳದ ವ್ಯಕ್ತಿಗಾಗಿ 34 ಕೋಟಿ ರೂ ಸಂಗ್ರಹ: ಏನಿದು ಸ್ಟೋರಿ?

Share It

ಕೋಝಿಕ್ಕೋಡ್:‌ ಮರಣ ದಂಡನೆಗೆ ಗುರಿಯಾಗಿದ್ದ ವ್ಯಕ್ತಿಯೊಬ್ಬರನ್ನು ರಕ್ಷಿಸಲು ಜಾತಿ, ಧರ್ಮ ಎಲ್ಲವನ್ನು ಮೀರಿ ಕ್ರೌಡ್‌ ಫಂಡಿಂಗ್‌ ಮಾಡುವ ಮೂಲಕ ಮಾನವೀಯತೆಯೇ ಶ್ರೇಷ್ಠ ಧರ್ಮವೆಂದು ಸಾರಿರುವ ಘಟನೆ ನಡೆದಿರುವುದು ವರದಿಯಾಗಿದೆ.


ಸೌದಿ ಅರೇಬಿಯಾದಲ್ಲಿ ಬಾಲಕನೊಬ್ಬ ಸಾವಿಗೆ ಕಾರಣರಾದರೆನ್ನುವ ಆರೋಪದ ಮೇಲೆ ಕೇರಳದ ವ್ಯಕ್ತಿಯೊಬ್ಬರು ಕಳೆದು 18 ವರ್ಷಗಳಿಂದ ಜೈಲಿನಲ್ಲಿದ್ದಾರೆ. ಅವರ ಹೆಸರು ಅಬ್ದುಲ್‌ ರಹೀಮ್.‌ ಇನ್ನೇನು ಕೆಲವೇ ದಿನಗಳಲ್ಲಿ ಮರಣ ದಂಡನೆಗೆ ಗುರಿಯಾಗಬೇಕಿದ್ದ ಅವರು, ಕೋಟ್ಯಂತರ ಜನರ ಸಹೃದಯತೆಯಿಂದ ಸಾವಿನ ಕುಣಿಕೆಯಿಂದ ಪಾರಾಗಿದ್ದಾರೆ. ಅದು ಹೇಗೆ ಎನ್ನುವ ಮಾಹಿತಿ ಇಲ್ಲಿದೆ…

ಯಾರು ಈ ಅಬ್ದುಲ್‌ ರಹೀಮ್?‌ : ಅದು 2006 ರ ಸಮಯ. ಚಾಲಕನ ಕೆಲಸಕ್ಕಾಗಿ ಕೋಝಿಕ್ಕೋಡ್ ಮೂಲದ ಅಬ್ದುಲ್‌ ರಹೀಮ್‌ ಸೌದಿಗೆ ತೆರಳುತ್ತಾರೆ ಆಗ ಅವರಿಗೆ 26 ವರ್ಷ. ಸೌದಿಯಲ್ಲಿನ ಕುಟುಂಬವೊಂದಕ್ಕೆ ಚಾಲಕನಾಗಿ ತೆರಳಿದ ಅಬ್ದುಲ್‌ ಅವರಿಗೆ ಆ ಕುಟುಂಬದಲ್ಲಿರುವ 15 ವರ್ಷದ ವಿಶೇಷ ಚೇತನ ಬಾಲಕನನನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ನೀಡಲಾಗಿತ್ತು. ಪಾರ್ಶ್ವವಾಯುವಿಗೆ ಒಳಗಾದ ಮಗನನ್ನು ನೋಡಿಕೊಳ್ಳಲು ರಹೀಮ್‌ ಅವರಿಗೆ ಮೊದಲೇ ಹೇಳಲಾಗಿತ್ತು.
ಬಾಲಕ ಅನಸ್‌ ಕತ್ತಿನ ಕೆಳಗೆ ನಿಶ್ಚಲನಾಗಿದ್ದ, ಈ ಕಾರಣದಿಂದ ಆತನಿಗೆ ಕುತ್ತಿಗೆಗೆ ಅಳವಡಿಸಿದ ಉಪಕರಣದ ಸಹಾಯದಿಂದ ಆಹಾರವನ್ನು ನೀಡಲಾಗುತ್ತಿತ್ತು. ಅದು 2006 ರ ಡಿಸೆಂಬರ್‌ 24 ರ ಸಮಯ. ಅಂದು ಕಾರಿನಲ್ಲಿ ಅನಸ್‌ ನನ್ನು ಕೂರಿಸಿಕೊಂಡು ರಹೀಮ್‌ ಅವರು ಶಾಪಿಂಗ್‌ ಗೆ ತೆರಳುತ್ತಿದ್ದರು. ಈ ವೇಳೆ ಅನಸ್‌ ತಮ್ಮ ಕಾರನ್ನು ಟ್ರಾಫಿಕ್‌ ಸಿಗ್ನಲ್‌ ನಿಂದ ಬೇರೆ ಮಾಡಿ ನಿಲ್ಲಿಸುವಂತೆ ಚಾಲಕನ ಜೊತೆ ಜಗಳವಾಡಿ, ಹಠ ಹಿಡಿದಿದ್ದಾನೆ. ಈ ವೇಳೆ ರಹೀಮ್‌ ಬಾಲಕನನ್ನು ಶಾಂತಗೊಳಿಸುವ ವೇಳೆ ಆಕಸ್ಮಿಕವಾಗಿ ಆತನ ಕೈ ಬಾಲಕನ ಕುತ್ತಿಗೆಯಲ್ಲಿದ್ದ ಉಪಕರಣಕ್ಕೆ ತಾಗಿದೆ. ಇದರಿಂದ ಉಸಿರಾಟಕ್ಕೆ ತೊಂದರೆಯಾಗಿ ಅನಸ್‌ ಪ್ರಜ್ಞೆ ತಪ್ಪಿ ಬಿದ್ದು, ಮೃತಪಟ್ಟಿದ್ದಾನೆ. ಆ ಕ್ಷಣದಲ್ಲಿ ರಹೀಮ್‌ ಎಷ್ಟೇ ಪ್ರಯತ್ನಪಟ್ಟರೂ ಬಾಲಕನನ್ನು ಉಳಿಸಲು ಸಾಧ್ಯವಾಗುವುದಿಲ್ಲ.

ಈ ಘಟನೆಯ ಬಳಿಕ ರಹೀಮ್‌ ನನ್ನು ಕೊಲೆ ಆರೋಪದ ಮೇಲೆ ಬಂಧಿಸಿದ್ದರು. ಸೌದಿಗೆ ತೆರಳಿದ 28 ದಿನದ ಬಳಿಕ ರಹೀಮ್‌ ಜೊತೆ ವಿಧಿ ಕ್ರೂರವಾಗಿ ನಡೆದುಕೊಳ್ಳುತ್ತದೆ. ಘಟನೆ ಆಕಸ್ಮಿಕ ನಡೆದರೂ ಅಲ್ಲಿನ ಕಾನೂನಿನ ಪ್ರಕಾರ ಅದು ಅಪರಾಧ ಕೃತ್ಯವಾಗಿ ಪರಿಗಣಿತವಾಗಿತ್ತು. ಈ ಕಾರಣದಿಂದ ಅಬ್ದುಲ್‌ ರಹೀಮ್‌ ಗೆ ಜೈಲು ಶಿಕ್ಷೆ ಆಗುತ್ತದೆ.
ಇದಾದ ಬಳಿಕ ಹತ್ತಾರು ಬಾರಿ ಸೌದಿಯಲ್ಲಿನ ಕೇರಳದ ವ್ಯಕ್ತಿಗಳು ಮೃತ ಬಾಲಕನ ಕುಟುಂಬದ ಬಳಿ ಘಟನೆಯ ಬಗ್ಗೆ ವಿವರಣೆ ನೀಡಿ, ಕ್ಷಮಾದಾನ ನೀಡುವಂತೆ ಮನವಿ ಮಾಡುತ್ತದೆ ಆದರೆ ಅದ್ಯಾವುದಕ್ಕೂ ಮಗನನ್ನು ಕಳೆದುಕೊಂಡ ಕುಟುಂಬ ಕ್ಷಮಾದಾನವನ್ನು ನೀಡುವುದಿಲ್ಲ.
2018 ರಲ್ಲಿ ನ್ಯಾಯಾಲಯ ರಹೀಮ್‌ ಅವರಿಗೆ ಮರಣ ದಂಡನೆ ಶಿಕ್ಷೆಯನ್ನು ನೀಡುತ್ತದೆ. ಮೇಲ್ಮನವಿ ಸಲ್ಲಿಸಿದ್ದರೂ, 2022 ರಲ್ಲಿ ಸೌದಿಯ ಉನ್ನತ ನ್ಯಾಯಾಲಯ ಕೂಡ ಹಿಂದಿನ ಕೋರ್ಟಿನ ಆದೇಶವನ್ನು ಎತ್ತಿ ಹಿಡಿಯುತ್ತದೆ.
ರಹೀಮ್‌ ರನ್ನು ಹೇಗಾದರೂ ಮಾಡಿ ರಕ್ಷಿಸಬೇಕೆನ್ನುವ ನಿಟ್ಟಿನಲ್ಲಿ ಕೋಝಿಕ್ಕೋಡ್ ನ ಜೊತೆಗೂಡಿ ಕ್ರಿಯಾ ಸಮಿತಿಯೊಂದನ್ನು ರಚಿಸುತ್ತಾರೆ. 2023 ರ ಅಕ್ಟೋಬರ್‌ 16 ರಂದು ರಹೀಮ್‌ ಅವರಿಗೆ ವೀಸಾ ನೀಡಿದ ಪೈಜ್‌ ಅವರ ಕುಟುಂಬವು 15 ಮಿಲಿಯನ್‌ ಸೌದಿ ರಿಯಲ್ಸ್(ಭಾರತದ 33.24 ಕೋಟಿ ರೂ) ನೀಡಿದರೆ ಕ್ಷಮಾದಾನ ನೀಡುವುದಾಗಿ ಕ್ರಿಯಾ ಸಮಿತಿಯ ಜೊತೆ ಒಪ್ಪಂದ ಮಾಡಿಕೊಳ್ಳುತ್ತದೆ. ಇದನ್ನು 6 ತಿಂಗಳ ಒಳಗೆಯೇ ನೀಡಬೇಕೆನ್ನುವ ಷರತ್ತನ್ನು ಹಾಕಲಾಗುತ್ತದೆ.
ಇದಾದ ನಂತರ ಕ್ರಿಯಾ ಸಮಿತಿ ಸಾಧ್ಯವಾದಷ್ಟು ಹಣವನ್ನು ಸಂಗ್ರಹಿಸುತ್ತದೆ. ಆ ಬಳಿಕ ಇದಕ್ಕಾಗಿ ʼಸೇವ್‌ ಅಬ್ದುಲ್‌ ರಹೀಮ್‌ʼ ಎನ್ನುವ ಮೊಬೈಲ್‌ ಅಪ್ಲಿಕೇಶನ್‌ ವೊಂದನ್ನು ಆರಂಭಿಸುತ್ತದೆ. ಇದರ ಮೂಲಕ ಕೇರಳಿಗರು ಸೇರಿದಂತೆ ದೇಶ – ವಿದೇಶದಲ್ಲಿ ನೆಲೆಸಿರುವ ಭಾರತೀಯರು ಹಾಗೂ ಇತರೆ ಜನರಲ್ಲಿ ನಿಧಿ ಸಂಗ್ರಹಕ್ಕೆ ಮುಂದಾಗುತ್ತಾರೆ.
ದೊಡ್ಡಮಟ್ಟದ ಹಣ ಸಂಗ್ರಹ ಮಾಡುವ ನಿಟ್ಟಿನಲ್ಲಿ ಶುರುವಾದ ಕಾರ್ಯಕ್ಕೆ ಎಲ್ಲೆಡೆಯಿಂದ ದೊಡ್ಡಮಟ್ಟದಲ್ಲೇ ಸಹಕಾರ ಸಿಗುತ್ತದೆ. ವರದಿಯೊಂದರ ಪ್ರಕಾರ 33 ಕೋಟಿ ರೂ.ನಲ್ಲಿ 24 ಕೋಟಿ ರೂ ನಾಲ್ಕೇ ದಿನದಲ್ಲಿ ಸಂಗ್ರಹವಾಗುತ್ತದೆ.


Share It

You cannot copy content of this page